ಫರೂಕ್ ಸಿಯಾರ್ - 
 	ಭಾರತದ ಒಂಬತ್ತನೆಯ ಮೊಗಲ್ ಚಕ್ರವರ್ತಿ (1713-1719). ಚಕ್ರವರ್ತಿ 1ನೆಯ ಷಾ ಅಲಮನ ಮೊಮ್ಮಗ, ಅಜಿûಮ್-ಉಸ್-ಷಾನನ ಮಗ. 1ನೆಯ ಷಾ ಅಲಮ್ ತೀರಿಕೊಂಡಾಗ (1712) ಸಿಂಹಾಸನಕ್ಕಾಗಿ ನಡೆದ ಯುದ್ಧದಲ್ಲಿ ಅಜಿûಮ್-ಉಸ್-ಷಾ ಮಡಿದಿದ್ದ. ಅವನ ತಮ್ಮ ಜಹಂದರ್ ಷಾ (1712-1713) ಸಿಂಹಾಸನವನ್ನೇರಿದ್ದ. ಮುಖ್ಯಮಂತ್ರಿ ಜುಲ್‍ಫಿಕರ್ ಖಾನನ ಬೆಂಬಲದಿಂದ ಫರೂಕ್‍ಸಿಯಾರ್ ತನ್ನ ಚಿಕ್ಕಪ್ಪನಾದ ಜಹಂದರ್ ಷಾನನ್ನು ಕತ್ತು ಹಿಸುಕಿ ಕೊಂದು ಪಟ್ಟಕ್ಕೆ ಬಂದ. ಸಿಂಹಾಸನವನ್ನು ಗಳಿಸಿಕೊಂಡ ಮೇಲೆ ಸ್ವಲ್ಪಕಾಲದಲ್ಲೇ ಅವನು ತನಗೆ ನೆರವು ನೀಡಿದ ಜುಲ್‍ಫಿಕರ್ ಖಾನನನ್ನೂ ಕೊಲ್ಲಿಸಿದ. ಹುಸೇನ್ ಅಲಿ ಮತ್ತು ಅಬ್ದುಲ್ಲಾ ಎಂಬ ಸಯ್ಯಿದ್ ಸೋದರರು ಫರೂಕ್‍ಸಿಯಾರನಿಗೆ ಸಹಾಯಕರಾಗಿದ್ದರು. ಅವನು ಹುಸೇನ್ ಅಲಿಯನ್ನು ದಂಡನಾಯಕನಾಗಿಯೂ ಅಬ್ದುಲ್ಲಾನನ್ನು ವಜೀರನಾಗಿಯೂ ನೇಮಿಸಿಕೊಂಡ. ಕ್ರಮೇಣ ಪ್ರಬಲರಾದ ಇವರಿಬ್ಬರ ಹಿಡಿತದಿಂದ ಹೇಗಾದರೂ ಬಿಡಿಸಿಕೊಳ್ಳಬೇಕೆಂದೂ ಫರೂಕ್ ಸಿಯಾರ್ ಸಮಯ ಕಾಯುತ್ತಲೇ ಇದ್ದ.

	ಫರೂಕ್‍ಸಿಯಾರ್ ದುರ್ಬಲ ಮನಸ್ಸುಳ್ಳವನಾಗಿದ್ದರೂ ಮಹಾಕ್ರೂರಿಯೂ ಮತಾಂಧನೂ ಅಗಿದ್ದ. ಸಿಖ್ ನಾಯಕ ಬಂಡಾನನ್ನು ಅವನ ಒಂದು ಸಾವಿರ ಅನುಯಾಯಿಗಳ ಸಮೇತ ಸೆರೆ ಹಿಡಿದು ಅವರನ್ನೆಲ್ಲ ಕೊಲ್ಲಿಸಿದ (1715). ಫರೂಕ್‍ಸಿಯಾರನ ಆಳ್ವಿಕೆಯ ಇನ್ನೊಂದು ಘಟನೆಯೆಂದರೆ ಇಂಗ್ಲಿಷ್ ಈಸ್ಟ್ ಇಂಡಿಯ ಕಂಪನಿಯ ವ್ಯಾಪಾರಕ್ಕೆ ನೀಡಲಾದ ರಿಯಾಯಿತಿಗಳು. ಬಂಗಾಲದಲ್ಲಿ ಅವರ ಸರಕುಗಳಿಗೆ ಸುಂಕದಿಂದ ವಿನಾಯಿತಿ ದೊರಕಿತು. 1715ರಲ್ಲಿ ಅವನ ಆಸ್ಥಾನಕ್ಕೆ ಬಂದಿದ್ದ ಇಂಗ್ಲಿಷ್ ರಾಯಭಾರಿಗಳು ಕಂಪನಿಗಾಗಿ ಸೌಲಭ್ಯಗಳನ್ನು ದೊರಕಿಸಿಕೊಂಡರು. ಆ ರಾಯಭಾರದಲ್ಲಿ ವಿಲಿಯಮ್ ಹ್ಯಾಮಿಲ್ಟನ್ ಎಂಬ ಶಸ್ತ್ರವೈದ್ಯನೂ ಇದ್ದ. ಫರೂಕ್‍ಸಿಯಾರನ ಮಗಳಿಗೆ ಹಿಡಿದಿದ್ದ ಉನ್ಮಾದವನ್ನು ಈತ ಗುಣಪಡಿಸಿದನೆಂದೂ ಇದಕ್ಕಾಗಿ ಕೃತಜ್ಞತೆಯಿಂದ ಚಕ್ರವರ್ತಿ ಕಂಪನಿಗೆ ಈ ಸೌಲಭ್ಯಗಳನ್ನು ನೀಡಿದನೆಂದೂ ಹೇಳಲಾಗಿದೆ.

	1719ರಲ್ಲಿ ಫರೂಕ್‍ಸಿಯಾರ್ ದುರ್ಮರಣಕ್ಕೆ ಈಡಾದ. ಮುಖ್ಯಮಂತ್ರಿ ಹುಸೇನ್ ಅಲಿಯನ್ನೂ ಅಬ್ದುಲ್ಲನನ್ನೂ ನಿವಾರಿಸಲು ಚಕ್ರವರ್ತಿ ಸಂಚು ಹೂಡಿದ್ದನೆಂಬ ಸಂಗತಿ ತಿಳಿದು ಅವರು ಥಟ್ಟನೆ ಅವನನ್ನು ಪದಚ್ಯುತಿಗೊಳಿಸಿ ಕಣ್ಣು ಕೀಳಿಸಿ ಕೊಂದು ಹಾಕಿದರು.  											(ಜಿ.ಆರ್.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ